Thursday, January 24, 2013

* ಹುಣ್ಣಿಮೆ *




ಮಗುವಿನಷ್ಟೇ ಮುದ್ದಾದ ಚಂದ್ರನ ಮುಖ,
ತಿಳಿ ಮಜ್ಜಿಗೆಯಂಥಾ ಬೆಳದಿಂಗಳು,
ಚಂದ್ರನಿಗೆ ಮುತ್ತಿಟ್ಟು ನೇವರಿಸುವಂತೆ
ಚಲಿಸುತ್ತಿರುವ ಮೋಡಗಳು,
ಆವರಿಸಿಹ ರಾತ್ರಿಯ ಮೌನಕ್ಕೆ ನಿದ್ದೆ ಬರಿಸುವಂತೆ 
ಮರದೆಲೆಗಳ ಬೀಸಣಿಕೆಯ ತಂಗಾಳಿ,
ಕಣ್ತುಂಬಿ ನನ್ನನುರುಳಿಸಲಿರುವ ನಿದ್ರೆಯ 
ನೂಕಿ ಬಾಯ್ತೆರೆದು ಕೂತ ನಾನು ಮೂಕ ವಿಸ್ಮಿತ...
:)
-ಶಶಿ

(31/8/12)

Saturday, January 12, 2013

*ಬಯಲು ಸೀಮೆ*



ಮಳೆಗಾಲದ ಸಂಜೆಯಲಿ
ಬಿಸಿಯುಗ್ಗುವ ಗಾಳಿ.!

ಸುರಿದು ಭುವಿಯ ತಣಿಸುತಿದ್ದ
ಮೋಡಗಳು ಸರಿದವೆಲ್ಲಿ.?

ತೇವ ಕಾಣದೆ ಅರೆಬೆಂದ
ಮೊಳಕೆಗಳು ಮಣ್ಣಿನಲ್ಲಿ;

ಲೋಕಕನ್ನವನುಣಿಸಿ
ಸಾರ್ಥಕ್ಯ ಹೊಂದುವ
ರೈತನಾಸೆ ಸಾವಿನಂಚಿನಲ್ಲಿ...
:(
-ಶಶಿ



*ಮುಕ್ತ*

ನಾ ಕವಿಯಾಗಲೊಲ್ಲೆ

ಆ ಜ್ಞಾನದರಿವು ನನಗಿಲ್ಲ

ಆಣೆಕಟ್ಟು ಒಡೆದು ಧುಮ್ಮಿಕ್ಕುವ

ಹವಣಿಕೆಯಲ್ಲಿರುವ ಹಿನ್ನೀರಂತೆ,

ಮನದೊಳಗಿಂದೊದೆದು ಹೊರನುಗ್ಗಲಿರುವ

ಭಾವಗಳಿಗೆ ಪದ ರೂಪದಿ ಹೊರಹರಿವು ಕಲ್ಪಿಸಿ

ಮುಕ್ತಿಗೊಳಿಸುವ ಅನಿವಾರ್ಯತೆ...
:)

-ಶಶಿ


(18/08/2012)